ಮಣಿಪುರಿ ಭಾಷೆ ಮತ್ತು ಸಾಹಿತ್ಯ
	
ಸಿನೋಟಿಬೆಟನ್ ಭಾಷಾ ಪರಿವಾರದ ಕುಕಿಚಿನ್ ಗುಂಪಿಗೆ ಸೇರಿದ ಭಾಷೆ. ಮೀಟೀ ಎಂಬುದು ಇದರ ಪರ್ಯಾಯ ನಾಮ. ಭಾರತದ ಮಣಿಪುರ ರಾಜ್ಯದ ಪ್ರಮುಖ ಭಾಷೆ 7.80.871 (1971) ಜನರ ತಾಯಿನುಡಿ.

	ಮಣಿಪುರಿ ಯೋಗಾತ್ಮಕ ಭಾಷೆ. ಒಂದು ಶಬ್ದದ ಪ್ರಯೋಜನವನ್ನು ಅದರ ಪ್ರತ್ಯಯ ನಿರ್ಣಯಿಸುತ್ತದೆ. ಧಾತುಗಳಿಗೆ ಆಖ್ಯಾತ ಪ್ರತ್ಯಯಗಳಿವೆ. ಎಲ್ಲ ನಾಮಪದಗಳಿಗೂ ವಿಭಕ್ತಿ ಪ್ರತ್ಯಯಗಳು ಒಂದೇ ಬಗೆಯಾಗಿವೆ. ಉದಾಹರಣೆಗೆ, ಷಲ್ ಅಥವಾ ಹಲ್-ನಾ (ಪ್ರಥಮಾ ಹಸು) ಷಲ್-ಬು (ದ್ವಿತೀಯ) ಷಲ್-ನ (ತೃತೀಯ), ಷಲ್-ಡ (ಚತುರ್ಥಿ), ಷಲ್-ಡಗೀ (ಪಂಚಮಿ), ಷಲ್-ಗಿ (ಷಷ್ಠಿ), ಷಲ್-ಡ (ಸಪ್ತಮೀ), ಇದರಲ್ಲಿ ಉಪಸರ್ಗಗಳಿಲ್ಲ. ಅದರೆ ಅವುಗಳ ಅರ್ಥವನ್ನು ವಿಭಕ್ತಿ ಪ್ರತ್ಯಯಗಳಿಂದ ನಿರ್ಧರಿಸಲಾಗುತ್ತದೆ. ಉದಾಹರಣೆಗೆ ಚಿನ್‍ಗ್ಗಿ ಮಥಕ್ಟ (ಪರ್ವತದ ಮೇಲೆ); ಚಿಂಗ್ (ಪರ್ವತ),-ಗಿ (ಅದರ). ಮಥಕ್ (ಪ್ರದೇಶ), -ಟ (ಮೇಲೆ), ಪ್ರತ್ಯೇಕ ಪದಗಳ ಜೋಡಣೆಯಿಂದ ನಾಮಪದ, ವಚನ ಮತ್ತು ತರತಮ ಭಾವಗಳನ್ನು ಸೂಚಿಸಲಾಗುತ್ತದೆ. ಶಬ್ದಗಳನ್ನು ನಾಮವಾಚಕ ಅಥವಾ ಗುಣವಾಚಕಗಳಾಗಿ ಉಪಯೋಗಿಸುವಾಗ ಅವುಗಳ ರೂಪದಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಭಾವ ನಾಮಗಳು ಗುಣವಾಚಕಗಳಿಗಿಂತ ಭಿನ್ನವಾಗಿಲ್ಲ. ಗುಣವಾಚಕಗಳು ಕ್ರಿಯಾಪದಗಳಿಂದ ನಿಷ್ಟನ್ನಗೊಳ್ಳುತ್ತವೆ. ಅನೇಕ ಅನಿರ್ದಿಷ್ಟ ಭೇದಗಳು. ಅನೇಕತ್ವ, ಗುಣದ ಪ್ರಮಾಣ ಅನುಕ್ರಮ ಪಾದಸ್ಪರ್ಯಕ್ರಿಯೆಗಳನ್ನು ನಿರ್ದೇಶಿಸಲು ಶಬ್ದಗಳನ್ನು ಪುನರಾವರ್ತನೆಗೊಳಿಸಲಾಗುತ್ತದೆ. ಸಂಬಂಧಾರ್ಥಕ ಸರ್ವನಾಮಗಳಿಲ್ಲ.

	ಈ ಭಾಷೆಯ ವಾಕ್ಯ ರಚನೆಯಲ್ಲಿ ಒಂದು ನಿರ್ದಿಷ್ಟ ಕ್ರಮವಿದೆ. ಅರ್ಥಕ್ಕೆ ಅನುಗುಣವಾಗಿ ಪದಗಳ ಜೋಡಣೆಯುಂಟು. ವಾಕ್ಯದಲ್ಲಿ ಮೊದಲು ಕರ್ತೃಪದ, ಅನಂತರ ಕರ್ಮಪದ ಮತ್ತು ಕ್ರಿಯಾಪದ ಇರುತ್ತವೆ. ಕ್ರಿಯಾವಿಶೇಷಣ ಕ್ರಿಯಾಪದಕ್ಕಿಂತ ಮೊದಲು ಬಳಕೆಯಾಗುತ್ತದೆ.

	ಮಣಿಪುರಿ ಸಂಖ್ಯಾವಾಚಕದಲ್ಲಿ ನಾಲ್ಕರ ಅನಂತರದ ಸಂಖ್ಯೆಗಳು ಸಂಸ್ಕøತದಿಂದ ಬಂದವುಗಳಾಗಿವೆ. ಆಧುನಿಕ ಮಣಿಪುರಿ ಭಾಷೆಯಲ್ಲಿ ದೇಶೀ ಶಬ್ದಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮತೀಯ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಅಭಿವ್ಯಕ್ತಿಸಲು ಸಂಸ್ಕøತ ಶಬ್ದಗಳನ್ನು ಬಳಸುತ್ತಾರೆ. ಪಾಶ್ಚಾತ್ಯ ಸಂಪರ್ಕದಿಂದಾಗಿ ಇಂಗ್ಲಿಷ್ ಪದಗಳೂ ಸೇರ್ಪಡೆಯಾಗಿವೆ. ಈ ಭಾಷೆಯಲ್ಲಿ ತಾನಾತ್ಮಕ ಲಕ್ಷಣಗಳಿವೆ. ಉಚ್ಚಾರಣೆಗೆ ಅನುಗುಣವಾಗಿ ಕೆಲವು ಏಕಾಕ್ಷರ ಶಬ್ದಗಳಿಗೆ ಎರಡಕ್ಕಿಂತ ಹೆಚ್ಚು ಅರ್ಥಗಳಿವೆ. ರಾಜಮನೆತನದವರಾಡುವ ಭಾಷೆ ಶ್ರೀಸಾಮಾನ್ಯರಾಡುವ ಭಾಷೆಗಿಂತ ಭಿನ್ನವಾಗಿದೆ. ಮಾತು ಗ್ರಾಮವಾಗಿರಬಾರದು ಮತ್ತು ಉದ್ದಿಷ್ಟ ಅರ್ಥವನ್ನು ಹೊರತು ಇತರ ಅಹಿತವೂ ರೂಕ್ಷವೂ ಆದ ಅರ್ಥಗಳನ್ನು ಧ್ವನಿಸಬಾರದು ಎಂಬ ಉದ್ದೇಶದಿಂದ ರಾಜಮನೆತನದವರು ವಿಶಿಷ್ಟ ಪದಸಮೂಹವನ್ನು ಬಳಸುತ್ತಾರೆ. ಇವರ ಬಗ್ಗೆ ಇತರರು ಮಾತಾಡಲು ಬಳಸುವ ಪದಗಳು ಸಂಸ್ಕøತದಿಂದ ಆಯ್ದುಕೊಂಡವಾಗಿವೆ.

	1600ಕ್ಕೂ ಮುಂಚೆ ಈ ಭಾಷೆಯಲ್ಲಿ ಕ ಖ ಙ ಚ ಛ ಞ ತ ಥ ನ ಪ ಫ ಮ ಅ ಯ ಲ ಸ ಹ ಕ್ಷ ಅಕ್ಷರಗಳು ಮಾತ್ರ ಬಳಕೆಯಲ್ಲಿ ಇದ್ದುವು. ಇವನ್ನು ಬಳಸಿಯೇ ಕೃತಿ ರಚನೆಯಾಗುತ್ತಿತ್ತು. ಖಗೆಂಬ ದೊರೆಯ (1630) ಆಳ್ವಿಕೆಯಲ್ಲಿ ಕೆಲವು ಅಕ್ಷರಗಳು ಸೇರಿದುವು. ಅನಂತರ ಭಾಗ್ಯಚಂದ್ರ ದೊರೆಯ (1700) ಕಾಲದಲ್ಲಿ ಬಂಗಾಳೀ ಅಕ್ಷರಮಾಲೆಗೆ ಸಮವಾಗುವಂತೆ ಹೊಸ ಅಕ್ಷರಗಳನ್ನು ಸೇರಿಸಲಾಯಿತು. ಅವು ಯಾವುವು ಎಂಬುದು ಖಚಿತವಾಗಿಲ್ಲ. ಬ್ರಿಟಿಷರ ಆಡಳಿತ ಪ್ರಾರಂಭವಾದಂದಿನಿಂದ (1891) ತಮ್ಮ ಮೂಲ ಲಿಪಿಯನ್ನು ತಿರಸ್ಕರಿಸಿ ಬಂಗಾಳೀ ಲಿಪಿಯನ್ನು ಬಳಸತೊಡಗಿದರು.

	ಸಾಹಿತ್ಯ: ಪ್ರಾಚೀನಯುಗ: ಮಣಿಪುರಿಯ ಪ್ರಾಚೀನ ಸಾಹಿತ್ಯವೇ ಉತ್ತಮವಾದುದೆಂದು ಆಧುನಿಕರೆಲ್ಲರೂ ಒಪ್ಪಿಕೊಳ್ಳುತ್ತಾರೆ. ಎಡೆಬಿಡದೆ ನಡೆದ ರಾಜಕೀಯ ಮತ್ತು ಮತೀಯ ವಿಪ್ಲವಗಳಿಂದ ಪ್ರಾಚೀನ ಕೃತಿಗಳು ನಷ್ಟವಾಗಿ ಅವನ್ನು ದೊರಕಿಸುವ ಪ್ರಯತ್ನ ನಡೆಯುತ್ತಿದೆ. ಮಣಿಪುರಿ ಭಾಷೆ ಸಂಸ್ಕøತ ಜನ್ಯವಲ್ಲ. ದ್ರಾವಿಡ ಭಾಷೆಗಳಂತೆ ಇದೂ ತನ್ನದೇ ಆದ ಬೆಳವಣಿಗೆ ಕಂಡಿದೆ. ಹಳೆಯ ಮಣಿಪುರಿ ಶಾಸನಗಳಿಂದ ಈ ಭಾಷೆ ಬರೆಹಕ್ಕಿಳಿದದ್ದು ಎಂಟನೆಯ ಶತಮಾನದಲ್ಲಿ ಎಂಬುದಾಗಿ ತಿಳಿದುಬರುತ್ತದೆ. ಗತಿಸಿದ ಡಬ್ಲ್ಯು. ಯುಂಜಾವ್ ಸಿಂಗ್ ಶೋಧಿಸಿದ ತಾಮ್ರ ಫಲಕಗಳಿಂದ 8ನೆಯ ಶತಮಾನದ ಖೊಂಗ್ ಟೆಕ್ ಚಯೋಯರೆನ್ ಬ ಎಂಬ ದೊರೆ ಶಿವನನ್ನೂ ದುರ್ಗೆಯನ್ನೂ ಪೂಜಿಸಿದನೆಂಬ ಸಂಗತಿ ತಿಳಿಯತ್ತದೆ. ಈ ಫಲಕಗಳು ಶ್ರೀಹರಿ ಎಂಬುದಾಗಿ ಮೊದಲಾಗುವುದರಿಂದ ಶೈವ ಮತದಿಂದ ವೈಷ್ಣವಮತದತ್ತ ತಿರುಗಿದ ಕಾಲವೆಂದು ಊಹಿಸಬಹುದು. ಶಾಸನಗಳ ಗದ್ಯ ಉತ್ತಮ ದರ್ಜೆಯದಾಗಿದೆ. ಮೂರನೆಯ ಶತಮಾನದಲ್ಲಿ ಬರೆದುದೆಂದು ಹೇಳಲಾದ ಪಾಯ್ ರೈಟನ್ ಖುನ್ ತೋಕ್ ಪಾ ಎಂಬ ಮತ್ತೊಂದು ಗ್ರಂಥವನ್ನು ಇಲ್ಲಿ ಉಲ್ಲೇಖಿಸಬಹುದು. ಪಾಯ್‍ರೈಟನ್ ಎಂಬಾತನ ಮುಂದಾಳುತನದಲ್ಲಿ `ಮೃತ್ಯುಭೂಮಿ ಯಿಂದ ಬಂದ ಜನರ ತಂಡವೊಂದು ಈ ಕಣಿವೆಯಲ್ಲಿ ನೆಲಸಿತೆಂಬುದನ್ನು ಈ ಹಸ್ತಪ್ರತಿ ತಿಳಿಸುತ್ತದೆ. ತಾಂತ್ರಿಕ ಮತ್ತು ಪುರಾಣ ಪ್ರಭಾವಗಳ ಮಹಾಪೂರದಿಂದಾಗಿ ಆರ್ಯ ಮತ್ತು ಆರ್ಯೇತರ ನಂಬಿಕೆಗಳೂ ಆಚಾರಗಳೂ ಪ್ರಾಚೀನ ಸಾಹಿತ್ಯದಲ್ಲಿ ಬೆರೆತುಹೋದವು.

	ಮಧ್ಯೆಯುಗ; ಮೊದಲಿನಿಂದಲೂ ಮಣಿಪುರಿ ಜನರು ಅಸ್ಸಾಮಿನ ಅಹೋಂ ಜನರಂತೆ ಕತೆ ಹೇಳುವ ಕಲೆಯನ್ನೂ ಗ್ರಂಥ ರಚನೆ ಮಾಡುವುದನ್ನೂ ಬೆಳೆಸಿಕೊಂಡಿದ್ದರು. ನೊಂಗ್‍ದ ಲೈರೆಲ್ ಪಖಂಗ್‍ಬಾವ್‍ನಿಂದ ಮೊದಲುಗೊಂಡು ರಾಜ್ಯದಲ್ಲಿ ನಡೆದ ಪ್ರತಿಯೊಂದು ಮುಖ್ಯ ದೈನಂದಿನ ವ್ಯವಹಾರಗಳ ಬಗ್ಗೆ 1780ರಲ್ಲಿ ಪುನಃ ರಚಿತ ಕೃತಿ ಚಿ ಥರೋಲ್ ಕುಂಬಬ ಎಂಬುದರಲ್ಲಿ ಮಾಹಿತಿ ದೊರೆಯುತ್ತದೆ. 17ನೆಯ ಶತಮಾನದ ಪೂರ್ವಭಾಗದಲ್ಲಿ ರಚಿತವಾಗಿರುವ ನಿಂಗ್‍ತೌರೆಲ್ ಷಿಂಗ್‍ಕಾಕ್ ಎಂಬ ಕೃತಿಯಲ್ಲಿ ಆ ಕಾಲದ ಅನೇಕ ಪ್ರಮುಖ ಪ್ರಸಂಗಗಳ ಉಲ್ಲೇಖವಿದೆ. ಅದೇ ಅವಧಿಯಲ್ಲಿ ನಿಂಗ್‍ತೌರೆಲ್ ಲುಂಬುಬ. ಲಾರೈಲಥುಪ್ ಮತ್ತು ಸಂಗೈಫುಮ್ಮಂಗ್ ಎಂಬ ಕೃತಿಗಳು ಇತಿಹಾಸ ಪೂರ್ವದ ಬೇರೆ ಬೇರೆ ರಾಜರ ಕಾಲದಲ್ಲಿ ಜರಗಿದ ಮುಖ್ಯ ಘಟನೆಗಳನ್ನು ಒಳಗೊಂಡಿವೆ. ಶೈವಮತ ದೃಷ್ಟಿಯಿಂದ ಲೋಕೋತ್ಪತ್ತಿ ಮತ್ತು ಮಣಿಪುರದ ಉತ್ಪತ್ತಿ ವಿಚಾರಗಳನ್ನು ಒಳಗೊಂಡ ಲೀಥಕ್ ಲೀಖರೋಲ್ ಎಂಬ ಗ್ರಂಥ ಮತ್ತು ಪಾರ್ವತೀಪರಮೇಶ್ವರರ ಅವತಾರಗಳೆಂದು ಹೇಳಲಾದ ನಂಗ್‍ಟೋಕ್‍ನಿಂಗ್‍ತೌ ಮತ್ತು ಪಾಥೋಯ್ ಬಿ ಎಂಬವರ ಅಮರ ಪ್ರೇಮ ಕಥೆಯನ್ನು ನಿರೂಪಿಸುವ ಪಾಥೋಯ್ ಬಿ ಖೋಗುಲ್ ಎಂಬ ಕೃತಿ ಗಮನಾರ್ಹ. ಈ ಕೃತಿಗಳು ಬಹಳ ಪ್ರಾಚೀನ ಕಾಲದವೆಂದು ಅಂತರಿಕ ಮತ್ತು ಬಾಹ್ಯಸಾಕ್ಷ್ಯಗಳು ಸೂಚಿಸಿದರೂ ಇವುಗಳ ಕಾಲ ಇನ್ನೂ ನಿರ್ಧರಿತವಾಗಿಲ್ಲ. ಖಂಬಾ ಮತ್ತು ತೋಯ್ ಬಿ ಒಂದು ಮಹಾಕಾವ್ಯ. ಇದರಲ್ಲಿ ಮೋಯಿರಾಂಗಿನ ಎರಡು ಆದಿವಾಸಿಕುಲಗಳ ಮುನ್ನೆಲೆಯಲ್ಲಿ ಹನ್ನೆರಡನೆಯ ಶತಮಾನದಲ್ಲಿ ಜರಗಿದವೆಂದು ಭಾವಿಸಲಾಗಿರುವ ಮುಖ್ಯ ಸಂಗತಿಗಳ ಉಲ್ಲೇಖವಿದೆ. ಈ ಕಾವ್ಯ ಶತಮಾನಗಳ ಕಾಲಗಳಿಂದಲೂ ಜನರಲ್ಲಿ ಮೌಖಿಕವಾಗಿ ಬಂದಿದೆ. ಸ್ಥಳೀಯ ಗಾಯಕರು ವಿಶೇಷ ಸಂದರ್ಭಗಳಲ್ಲೂ ಈ ಕಾವ್ಯವನ್ನು ಹಾಡುತ್ತಾರೆ. ರಾಜಕುಮಾರಿ ಮತ್ತು ಒಬ್ಬ ಶೂರ ರಾಜಕುಮಾರನ ಅವಿನಾಶೀ ಪ್ರಣಯವನ್ನೂ ಅನೇಕ ಕಷ್ಟಗಳನ್ನೆದುರಿಸಿ ಅವರು ಕೊನೆಗೆ ಒಂದಾಗಿ ಮದುವೆಯಾದ ಪರಿಯನ್ನೂ ಈ ಕಾವ್ಯ ರಮ್ಯವಾಗಿ ನಿರೂಪಿಸುತ್ತದೆ. 

	18ನೆಯ ಶತಮಾನದ ಆದಿಭಾಗದಲ್ಲಿ ಘರೀಬ್ ನಿವಾಜ್ ಪಾಂಹೈಬಾ ಎಂಬಾತನ ಆಳ್ವಿಕೆ ಒಂದು ಹೊಸ ಯುಗವನ್ನು ತೆರೆಯಿತು. ಅವನ ಕಾಲದಲ್ಲಿ ಅನೇಕ ಭಾಷಾಂತರಗಳೂ ಮೂಲ ಕೃತಿಗಳೂ ರಚನೆಗೊಂಡವು. ಕೃತ್ತಿವಾಸ ರಾಮಾಯಣ ಭಾಷಾಂತರವಾಯಿತು. ಗಂಗಾದಾಸಸೇನನ ಮಾಹಾಭಾರತದ ಕೆಲವು ಭಾಗಗಳು ಈ ಭಾಷೆಗೆ ಅನುವಾದಗೊಂಡವು. ರಮಂದಿ ಪಂಥದವರ ದುರದೃಷ್ಟಕರ ಪ್ರಭಾವದಿಂದ ದೊರೆ ಮಣಿಪುರಿ ಭಾಷೆಯಲ್ಲಿದ್ದ ಅನೇಕ ಮುಖ್ಯ ಪುರಾಣಗಳನ್ನು ಬೆಂಕಿಗೆ ಹಾಕಿಸಿದ. ಮಧ್ಯಯುಗದಲ್ಲಿ ಮುಸ್ಲಿಮ್ ಪ್ರಭಾವಕ್ಕೆ ಮಣಿಪುರಿ ಒಳಗಾಗಲಿಲ್ಲ. ಈ ಅವಧಿಯಲ್ಲಿ ಅದರ ಸಾಹಿತ್ಯದಲ್ಲಿ ಹಿಂದೂಮತ ಮತ್ತಿತರ ಮತಗಳು ಸಮರಸವಾಗಿ ಹೊಂದಿಕೊಂಡವು. 

	ಇತಿಹಾಸ, ಶಾಸ್ತ್ರಗ್ರಂಥ ಮತ್ತು ಪುರಾಣಗಳ ಜೊತೆಗೆ ನೂರಾರು ಪ್ರಾಚೀನ ಹಸ್ತಪ್ರತಿಗಳು ದೊರೆತಿವೆ. ಅವುಗಳಲ್ಲಿ ಖಗೋಳವಿಜ್ಞಾನ, ಜ್ಯೋತಿಷ್ಯ, ಯುದ್ಧವಿದ್ಯೆ, ಅರಣ್ಯವಿಜ್ಞಾನ, ವೈದ್ಯ, ವ್ಯವಸಾಯ, ಭೂವಿಜ್ಞಾನ, ರಾಜ್ಯಶಾಸ್ತ್ರ, ಮುಂತಾದ ವಿಷಯಗಳಿವೆ. ಸಾಂಸ್ಕøತಿಕ ಪುನರುಜ್ಜೀವನ ಮತ್ತು ಸಂಘಟನೆಯ ಈ ಪ್ರಕ್ರಿಯೆ ಹತ್ತೊಂಬತ್ತನೆಯ ಶತಮಾನದ ಉತ್ತರ ಭಾಗದಲ್ಲಿ ಕಾಣಿಸಿಕೊಂಡ ಗೌರೀಯ ವೈಷ್ಣವ ಮತದ ಪ್ರವಾಹದಲ್ಲಿ ಕೊಚ್ಚಿ ಹೋಗುವ ತನಕವೂ ಬೆಳೆದು ಬಂದಿದೆ. ಈ ಪ್ರವಾಹದಲ್ಲಿ ಮಣಿಪುರಿಯ ಪ್ರಾಚೀನ ಲಿಪಿ ಕೂಡ ಮರೆಯಾಗಿ ಬಂಗಾಲೀ ಲಿಪಿಗೆ ಎಡೆಮಾಡಿಕೊಟ್ಟಿತು. ಮಹಾರಾಜ ಚಂದ್ರಕೀರ್ತಿ ಮಣಿಪುರಿಯಲ್ಲಿ ರಚಿಸಿದಂಥ ಒಂದು ಹಾಡನ್ನು ರಾಷ್ಟ್ರಗೀತೆಯಾಗಿ ಮಾಡಿ ಅಂದಿನ ಸಂಪ್ರದಾಯವನ್ನು ಮುರಿಯುವ ತನಕವೂ ಮಣಿಪುರಿ ಭಾಷೆಗೂ ಸಾಹಿತ್ಯಕ್ಕೂ ಅಗ್ರಸ್ಥಾನವಿರಲಿಲ್ಲ.

ಆಧುನಿಕ ಯುಗ: 20ನೆಯ ಶತಮಾನದ ಆದಿಭಾಗ ಮಣಿಪುರಿ ಸಾಹಿತ್ಯದ ಇತಿಹಾಸದಲ್ಲಿ ನವಜಾಗೃತಿ ತಂದಿತು. ಕಥೆ, ಕಾದಂಬರಿ, ನಾಟಕ, ಭಾವಗೀತೆ, ಲಲಿತ ಪ್ರಬಂಧ ಮುಂತಾದ ಪ್ರಕಾರಗಳು ಬಂಗಾಲೀ ಭಾಷೆ ಸಾಹಿತ್ಯದಿಂದಲೇ ಅತ್ಯಧಿಕ ಪ್ರಭಾವ ಹೊಂದಿವೆ. ಎಲ್. ಐಬನ್‍ಗೋಹಾಲ್‍ಸಿಂಗನ ನರಸಿಂಗ್ ಎಂಬ ನಾಟಕ, ಎಸ್. ಲಲಿತಸಿಂಗನ ಅರೆಪ್ಪ ಮರಪ್ (ಚಿರಸ್ನೇಹಿತ) ಮತ್ತು ಸತಿ ಖೊಂಗ್‍ನಾಂಗ್, ಕಮಲಸಿಂಗನ ಮಾಧಬಿ ಎಂಬ ಕಾದಂಬರಿ ಮತ್ತು ಅಂಗನ್ ಘಲ್‍ಸಿಂಗ್‍ನ ಖಂಬಾ ಮತ್ತು ತೋಯ್‍ಬಿ ಎಂಬ ಮಹಾಕಾವ್ಯ ಹೆಸರಾಂತ ಕೃತಿಗಳು. ಆರ್ ಕೆ. ಶಿತಾಲ್‍ಜಿತ್ ಪ್ರಸಿದ್ಧ ಕಾದಂಬರಿಕಾರ, ಕತೆಗಾರ, ಉದಾರ ಮಾನವೀಯತೆ, ಶ್ರಮಜೀವಿಗಳ ಮೇಲೆ ಕನಿಕರ ಇವು ಆಧುನಿಕ ಸಾಹಿತ್ಯದ ವಿಶಿಷ್ಟ ಲಕ್ಷಣಗಳು, ಜಿ. ಸಿ. ಟೋಗ್‍ಬ್ರಾ ಮುಂತಾದ ಕೆಲವು ಪ್ರಗತಿಪರ ಲೇಖಕರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪ್ರದಾಯನಿಷ್ಠರೂ ಇಲ್ಲದಿಲ್ಲ. ಪುನರುತ್ಥಾನ ಪ್ರಕ್ರಿಯೆ ಕುಸುಮಿತವಾಗುವುದು ತಡವಾಗಿದ್ದರೂ ಮಣಿಪುರಿ ಸಾಹಿತ್ಯ ಈಗ ಭಾರತದ ಇತರ ಸಾಹಿತ್ಯಗಳಂತೆಯೇ ಪ್ರೇರಣೆಗಳನ್ನೂ ಪ್ರಚೋದನೆಗಳನ್ನೂ ಪಡೆದಿದೆ. ವಿಚಾರ, ವಿಮರ್ಶೆ, ಮತ್ತು ವಾಸ್ತವತೆಯ ದಾರಿಯನ್ನು ಹಿಡಿದಿರುವ ಆಧುನಿಕ ಪ್ರವೃತ್ತಿಯನ್ನು ತನ್ನದಾಗಿ ಮಾಡಿಕೊಂಡಿದೆ. ಅದರಿಂದಾಗಿ ಹಲವಾರು ಉತ್ತಮ ಕೃತಿಗಳು ಮೂಡಿಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಮಣಿಪುರಿ ಭಾಷೆ ಸಾಹಿತ್ಯಕ್ಕೆ ಮಾನ್ಯತೆ ನೀಡಿದೆ; ಶ್ರೇಷ್ಠ ಕೃತಿಗಳಿಗೆ ಪುರಸ್ಕಾರ ನೀಡುವುದರ ಮೂಲಕ ಲೇಖಕರನ್ನು ಗೌರವಿಸುತ್ತಿದೆ. 			 
(ಆರ್.ಕೆ.ಎಸ್.ಎಸ್.; ಇ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ